
ಎಐಯುಟಿಯುಸಿ (AIUTUC) ನೇತೃತ್ವದಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟವು ಇಂದಿಗೆ 12ನೇ ದಿನಕ್ಕೆ ಕಾಲಿಟ್ಟಿತು. ಇಂದು ಕೂಡ ಅನೇಕ ಗಣ್ಯರು ಹೋರಾಟದ ಸ್ಥಳಕ್ಕೆ ಭೇಟಿ ನೀಡಿ, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಬೆಂಬಲಿಸಿ ಮಾತನಾಡಿದರು.
ಬರಹಗಾರರು ಹಾಗೂ ಸ್ತ್ರೀವಾದಿ ಚಿಂತಕರಾದ ಆಶಾ ದೇವಿ ಅವರು ಮಾತನಾಡಿ, “ಬಲಿಷ್ಠರಿಗೆ ಅನುದಾನ ಮಂಜೂರು ಮಾಡಲು ರಾಜ್ಯ ಸರ್ಕಾರದ ಬಳಿ ಹಣವಿದೆ; ಆದರೆ ದುಡಿಯುವ ಜನರಿಗೆ ನೀಡಲು ಹಣವಿಲ್ಲ. ಆದರೂ ಆಶಾ ಕಾರ್ಯಕರ್ತೆಯರು ಭರವಸೆ ಕಳೆದುಕೊಳ್ಳಬಾರದು. ಕೆಲವು ವರ್ಷಗಳ ಹಿಂದೆ ನಡೆದ ಗಾರ್ಮೆಂಟ್ಸ್ ಕಾರ್ಮಿಕರ ಹೋರಾಟವು ಕೇಂದ್ರ ಸರ್ಕಾರದ ಪಿ.ಎಫ್. (PF) ನೀತಿಯನ್ನು ಕೇವಲ ಎರಡು ದಿನಗಳಲ್ಲಿ ಹೇಗೆ ಸೋಲಿಸಲು ಸಾಧ್ಯವಾಯಿತು ಎಂಬುದನ್ನು ನೆನಪಿಸಿಕೊಳ್ಳಿ. ಹೋರಾಟವನ್ನು ಕೈಬಿಡಬೇಡಿ, ಇಂದಲ್ಲ ನಾಳೆ ಜಯ ನಿಮ್ಮದೇ” ಎಂದರು.

ಚಿತ್ರನಟರಾದ ಚೇತನ್ ಅಹಿಂಸಾ ಅವರು ಮಾತನಾಡುತ್ತಾ, “ಹಠ ಮಾಡುತ್ತಿರುವುದು ರಾಜ್ಯ ಸರ್ಕಾರವೇ ಹೊರತು ಕಾರ್ಮಿಕರಲ್ಲ. ‘ಬ್ಲ್ಯಾಕ್‌ಮೇಲ್’ ಎಂದು ಆರೋಪಿಸುವುದೇ ನಿಜವಾದ ಬ್ಲ್ಯಾಕ್‌ಮೇಲ್. ಆಶಾಗಳದು ನ್ಯಾಯಕ್ಕಾಗಿ ನಡೆಯುತ್ತಿರುವ ಪಟ್ಟುಬಿಡದ ಹೋರಾಟವಾಗಿದೆ. ರಾಜ್ಯ ಸರ್ಕಾರ ಕೇವಲ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುವ ಬದಲು, ತನ್ನ ಪಾಲಿನ ಜವಾಬ್ದಾರಿಯನ್ನು ನಿಭಾಯಿಸಲಿ. ಈ ಪುರುಷಪ್ರಧಾನ ವ್ಯವಸ್ಥೆಯಲ್ಲಿ ನ್ಯಾಯ ನೀಡದೆ, ಆಶಾಗಳ ನಿಸ್ವಾರ್ಥ ಸೇವೆಯನ್ನು ಸರ್ಕಾರಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ಇಂದು ಬೆರಳೆಣಿಕೆಯಷ್ಟು ಉಳ್ಳವರ ಬಳಿ ದೇಶದ ಶೇ. 50ರಷ್ಟು ಆಸ್ತಿ ಶೇಖರಣೆಯಾಗಿದೆ; ಅದೇ ದೇಶದ ಶೇ. 50ರಷ್ಟು ಸಾಮಾನ್ಯ ಜನರ ಬಳಿ ಕೇವಲ ಶೇ. 5ರಷ್ಟು ಆಸ್ತಿ ಇದೆ. ಸರ್ಕಾರಗಳು ಉಳ್ಳವರಿಗೆ ಹೆಚ್ಚಿನ ತೆರಿಗೆ ವಿಧಿಸಿ, ದುಡಿಯುವ ಜನರಿಗೆ ಸೌಲತ್ತುಗಳನ್ನು ನೀಡಬೇಕು. ನಿಮ್ಮ ಹೋರಾಟಕ್ಕೆ ಜಯವಾಗಲಿ, ನಾನು ಸದಾ ನಿಮ್ಮ ಜೊತೆ ಇರುತ್ತೇನೆ” ಎಂದರು.
ಪತ್ರಕರ್ತರಾದ ಚಂದ್ರಕಾಂತ್ ವಡ್ಡು ಅವರು ಮಾತನಾಡುತ್ತಾ, “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶಾಗಳಿಗೆ ತಾವು ನೀಡಿದ ಭರವಸೆಗೂ, ತಮಗೂ ಸಂಬಂಧವಿಲ್ಲದಂತೆ ನಿನ್ನೆ ಹೇಳಿಕೆ ನೀಡಿರುವುದು ಅವರ ಧೋರಣೆಯನ್ನು ಎತ್ತಿ ತೋರಿಸುತ್ತದೆ. 4.5 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ರಾಜ್ಯ ಸರ್ಕಾರಕ್ಕೆ ಆಶಾಗಳ ಬೇಡಿಕೆಯನ್ನು ಈಡೇರಿಸುವುದು ದೊಡ್ಡ ವಿಷಯವೇನಲ್ಲ. ಸರ್ಕಾರ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಈಗಾಗಲೇ ಹಲವು ಬಾರಿ ಭರವಸೆಗಳಿಂದ ಮೋಸ ಹೋಗಿರುವ ಆಶಾ ಕಾರ್ಯಕರ್ತೆಯರು ಲಿಖಿತ ಆದೇಶಕ್ಕಾಗಿ ಪಟ್ಟು ಹಿಡಿದಿರುವುದು ಸಂಪೂರ್ಣ ಸರಿಯಾಗಿದೆ” ಎಂದರು.