*ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆ**ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟಕ್ಕೆ 24 ನೂತನ ಸಚಿವರ ಸೇರ್ಪಡೆ*
ಬೆಂಗಳೂರು, ಮೇ 28 (ಕರ್ನಾಟಕ ವಾರ್ತೆ):
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟಕ್ಕೆ 24 ನೂತನ ಸಚಿವರು ಸೇರ್ಪಡೆಯಾಗುವುದರೊಂದಿಗೆ ನೂತನ ಸರ್ಕಾರದ ಪೂರ್ಣ ಪ್ರಮಾಣದ ಸಚಿವ ಸಂಪುಟ ಇಂದು ರಚನೆಯಾಯಿತು
ರಾಜಭವನದ ಗಾಜಿನ ಮನೆಯಲ್ಲಿ ಇಂದು ಬೆಳಗ್ಗೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಅವರ ಸಮ್ಮುಖದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಅಧಿಕಾರ ಗೋಪ್ಯತಾ ಪ್ರಮಾಣ ವಚನವನ್ನು ಬೋಧಿಸಿದರು.
ಹೆಚ್ ಕೆ ಪಾಟೀಲ್, ಕೃಷ್ಣಬೈರೇಗೌಡ, ಎನ್ ಚೆಲುವರಾಯಸ್ವಾಮಿ, ಕೆ ವೆಂಕಟೇಶ್, ಡಾ ಹೆಚ್. ಸಿ.ಮಹದೇವಪ್ಪ ಈಶ್ವರ್ ಖಂಡ್ರೆ, ಕೆ ಎನ್ ರಾಜಣ್ಣ, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪುರ. ಶಿವಾನಂದ ಪಾಟೀಲ್, ಆರ್.ಬಿ. ತಿಮ್ಮಾಪುರ್, ಎಸ್ ಎಸ್ ಮಲ್ಲಿಕಾರ್ಜುನ್, ಶಿವರಾಜ್ ತಂಗಡಗಿ, ಶರಣ ಪ್ರಕಾಶ್ ಪಾಟೀಲ್, ಮಾಂಕಾಳ ವೈದ್ಯ, ಲಕ್ಷ್ಮಿ ಹೆಬ್ಬಾಳ್ಕರ್, ರಹೀಂ ಖಾನ್, ಡಾ.ಡಿ.ಸುಧಾಕರ್, ಸಂತೋಷ್ ಲಾಡ್, ಎನ್.ಎಸ್.ಬೋಸರಾಜು, ಬಿ. ಎಸ್.ಸುರೇಶ್ ( ಬೈರತಿ ಸುರೇಶ್ ),ಸಾರೇಕೊಪ್ಪ ಮಧು ಬಂಗಾರಪ್ಪ, ಎಂ. ಸಿ.ಸುಧಾಕರ್ ಹಾಗೂ ಬಿ.ನಾಗೇಂದ್ರ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮೊದಲ ಬಾರಿಗೆ ಸಚಿವರಿವರು:
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಕೆ.ವೆಂಕಟೇಶ್, ಮಧುಗಿರಿ ವಿಧಾನಸಭಾ ಕ್ಷೇತ್ರದ ಕ್ಯಾತಸಂದ್ರ ನಂಜಪ್ಪ ರಾಜಣ್ಣ, ಭಟ್ಕಳ ವಿಧಾನಸಭಾ ಕ್ಷೇತ್ರದ ಮಾಂಕಾಳ ವೈದ್ಯ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಲಕ್ಷೀ ಹೆಬ್ಬಾಳ್ಕರ್, ರಾಯಚೂರು ಜಿಲ್ಲೆಯ ಕಾಂಗ್ರೆಸ್ ಮುಖಂಡ ಎನ್ ಎಸ್ ಬೋಸರಾಜು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬೈರತಿ ಸುರೇಶ್, ಸೊರಬ ವಿಧಾನಸಭಾ ಕ್ಷೇತ್ರದ ಮಧು ಬಂಗಾರಪ್ಪ, ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಎಂ ಸಿ ಸುಧಾಕರ್ ಹಾಗೂ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿ ನಾಗೇಂದ್ರ ಅವರು ಮೊದಲ ಬಾರಿಗೆ ಸಚಿವರಾಗಿದ್ದಾರೆ. ಉಳಿದವರು ಈ ಹಿಂದೆ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.
ರಹೀಂ ಖಾನ್ ಅವರು ಇಂಗ್ಲಿಷ್ ಭಾಷೆಯಲ್ಲಿ ಹಾಗೂ ಉಳಿದೆಲ್ಲರೂ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಅಲ್ಲದೆ, ಡಾ.ಎಚ್.ಸಿ. ಮಹದೇವಪ್ಪ ಅವರು ಸತ್ಯ ನಿಷ್ಠೆಯ ಹೆಸರಿನಲ್ಲಿ, ಕೆ ಎನ್ ರಾಜಣ್ಣ ಅವರು ಬುದ್ಧ ಬಸವ ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ, ಶಿವಾನಂದ ಪಾಟೀಲ್ ಅವರು ಅಣ್ಣ ಬಸವಣ್ಣ ಅವರ ಹೆಸರಿನಲ್ಲಿ, ಎಸ್ ಎಸ್ ಮಲ್ಲಿಕಾರ್ಜುನ ಅವರು ಕಲ್ಲೇಶ್ವರ ದೇವರ ಹೆಸರಿನಲ್ಲಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಗಜ್ಯೋತಿ ಬಸವೇಶ್ವರ, ಛತ್ರಪತಿ ಶಿವಾಜಿ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಜನತೆ ಮತ್ತು ತಮ್ಮ ತಾಯಿ ಗಿರಿಜಾ ಬಾಯಿ ಅವರ ಹೆಸರಿನಲ್ಲಿ, ರಹೀಂ ಖಾನ್ ಅವರು ಅಲ್ಲಾಹ್ ಹೆಸರಿನಲ್ಲಿ, ಬಿ ನಾಗೇಂದ್ರ ಅವರು ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ ಹಾಗೂ ಉಳಿದ ಎಲ್ಲರೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಎಲ್ಲರಿಗೂ ರಾಜ್ಯಪಾಲರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಭಾಧ್ಯಕ್ಷರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಕಾರ್ಯಕ್ರಮ ಪ್ರಾರಂಭಿಲು ಅನುಮತಿ ಪಡೆದು ಸಮಾರಂಭವನ್ನು ನಿರ್ವಹಿಸಿ ನಿರೂಪಿಸಿದರು. ಸಮಾರಂದಲ್ಲಿ ಗಣ್ಯರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
—-