“ಎಐಸಿಸಿ ಅಧ್ಯಕ್ಷರಾದ ಶ್ರೀಯುತ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ ನಾಯಕರ ಜತೆ ಚರ್ಚೆ ಮಾಡಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಭಿಪ್ರಾಯ ಪಡೆದು ಸಿದ್ದರಾಮಯ್ಯ ಅವರನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಏಕೈಕ ಉಪಮುಖ್ಯಮಂತ್ರಿಯಾಗಿ ಹಾಗೂ ಮುಂಬರುವ ಲೋಕಸಭಾ ಚುನಾವಣೆವರೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಸಲು ತೀರ್ಮಾನಿಸಿದ್ದಾರೆ” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರ ಮಾತಿನ ಮುಖ್ಯಾಂಶಗಳು;
ಕರ್ನಾಟಕ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದು, ಅವರಿಗೆ ಮೊದಲು ಹೃದಯಪೂರ್ವಕ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ.
ಈ ಚುನಾವಣೆ ರಾಜ್ಯದ ಬಡವರು ಹಾಗೂ ಶ್ರೀಮಂತರ ನಡುವಣ ಚುನಾವಣೆ ಆಗಿತ್ತು. ಹೀಗಾಗಿ ರಾಜ್ಯದ ಬದ ಹಾಗೂ ಮಾಧ್ಯಮ ವರ್ಗದ ಜನ ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ನಮ್ಮ ಪಕ್ಷದ ಎಲ್ಲಾ ನಾಯಕರು ಬಹಳ ಕಠಿಣ ಶ್ರಮವಹಿಸಿದ್ದಾರೆ.
ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ತಿಂಗಳ ಕಾಲ ಪ್ರಚಾರದಲ್ಲಿ ನಿರಂತರವಾಗಿ ಭಾಗವಹಿಸಿ ನಮಗೆ ಮಾರ್ಗದರ್ಶನ ನೀಡಿದ್ದರು. ಭಾರತ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ಪಕ್ಷದ ಪ್ರಚಾರ ಆರಂಭವಾಗಿ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲಾಗಿತ್ತು. ಹೀಗಾಗಿ ನಾನು ರಾಹುಲ್ ಗಾಂಧಿಗೆ ಧನ್ಯವಾದ ಅರ್ಪಿಸುತ್ತೇನೆ.
ಪ್ರಿಯಾಂಕಾ ಗಾಂಧಿ ಅವರು ಕೂಡ ನಿರಂತರ ಪ್ರಚಾರ ಮಾಡಿದ್ದು, ಅವರ ಸಭೆಗಳು ಜನಪ್ರಿಯವಾಗಿದ್ದವು. ಇನ್ನು ಸೋನಿಯಾ ಗಾಂಧಿ ಅವರ ಉಪಸ್ಥಿತಿ ಹಾಗೂ ಮಾರ್ಗದರ್ಶನ ಪಕ್ಷದ ಕಾರ್ಯಕರ್ತರಲ್ಲಿ ಶಕ್ತಿ ತುಂಬಿತು.
ಮೇ 13ರಂದು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದ್ದು, 14ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿತ್ತು. ಅಧ್ಯಕ್ಷರು ಮೂವರು ವೀಕ್ಷಕರನ್ನು ಕಳುಹಿಸಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದರು.
ನಮ್ಮ ಪ್ರಜಾಪ್ರಭುತ್ವ ಪಕ್ಷವಾಗಿದ್ದು, ನಮ್ಮ ಪಕ್ಷದಲ್ಲಿ ಸರ್ವಾಧಿಕಾರ ನಿರ್ಧಾರಕ್ಕೆ ಅವಕಾಶ ಇಲ್ಲ. ನಮ್ಮಲ್ಲಿ ಒಮ್ಮತದ ತೀರ್ಮಾನಕ್ಕೆ ಪ್ರಯತ್ನ ಮಾಡಲಾಗಿತ್ತು. ಕರ್ನಾಟಕ ರಾಜ್ಯದಲ್ಲಿ ನಮ್ಮ ಪಕ್ಷದಲ್ಲಿ ಅನೇಕ ದೊಡ್ದ ದೊಡ್ದ ನಾಯಕರು ಇದ್ದಾರೆ.
ಸಿದ್ದರಾಮಯ್ಯ ಅವರ ಅನುಭವ, ಆಡಳಿತ ಶೈಲಿ ಹೊಂದಿದ್ದು, ಚುನಾವಣೆಯಲ್ಲಿ ಪಕ್ಷಕ್ಕೆ ಪರಿಶ್ರಮ ಹಾಕಿ ಪ್ರಚಾರ ಮಾಡಿದ್ದಾರೆ. ನಮ್ಮ ಪಕ್ಷದ ಅತ್ಯಂತ ಪ್ರಬಲ ಸಂಘಟನಾಕಾರ ಡಿ.ಕೆ. ಶಿವಕುಮಾರ್, ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರಿಗೆ ಶಕ್ತಿ ತುಂಬಿದ್ದಾರೆ. ತಳಹಂತದವರೆಗೆ ತಲುಪಿ ಪಕ್ಷ ಸಂಘಟಿಸಿದ್ದರು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರ ಜೋಡಿ ಅತ್ಯುತ್ತಮ ಜೋಡಿಯಾಗಿದ್ದು, ಇಬ್ಬರೂ ಕಾಂಗ್ರೆಸ್ ಪಕ್ಷದ ಶಕ್ತಿ ಆಗಿದ್ದಾರೆ. ಇವರಿಬ್ಬರೂ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷರು ಈ ವಿಚಾರವಾಗಿ ಇಬ್ಬರೂ ನಾಯಕರ ಜತೆ ಪ್ರತ್ಯೇಕವಾಗಿ ಹಲವು ಸಭೆ ನಡೆಸಿದ್ದಾರೆ. ಇನ್ನು ಹಿರಿಯ ನಾಯಕರ ಜತೆಯೂ ಚರ್ಚೆ ಮಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ಅಭಿಪ್ರಾಯ ಸಂಗ್ರಹಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ರಾಜ್ಯದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಶ್ರೀಯುತ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ರಾಜ್ಯದ ರಾಜ್ಯದ ಏಕೈಕ ಉಪಮುಖ್ಯಮಂತ್ರಿ ಆಗಿ ಆಯ್ಕೆ ಆಗಿದ್ದು, ಲೋಕಸಭೆ ಚುನಾವಣೆ ಮುಕ್ತಾಯದವರೆಗೂ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸಂಜೆ ಶಾಸಕಾಂಗ ಪಕ್ಷದ ನಸಭೆ ನಡೆಯಲಿದ್ದು, ಅಧಿಕೃತವಾಗಿ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಲಾಗುವುದು. ಇನ್ನು ಮೇ 20ರಂದು ಪ್ರಮಾಣ ವಚನ ಸ್ವೀಕಾರ ಮಾಡಲಾಗುವುದು. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿ ಜತೆಗೆ ಕೆಲವು ಸಚಿವರುಗಳು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
*ರಣದೀಪ್ ಸಿಂಗ್ ಸರ್ಜೇವಾಲ:*
ಈ ಗೆಲುವಿನ ಮೂಲಕ ಕರ್ನಾಟಕ ರಾಜ್ಯದ ಆರೂವರೆ ಕೋಟಿ ಜನರ ಜವಾಬ್ದಾರಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಮೇಲೆ ಇದೆ. ಈ ಗೆಲುವು ಕೇವಲ ಕಾಂಗ್ರೆಸ್ ಪಕ್ಷದ ಗೆಲುವು ಮಾತ್ರವಲ್ಲ. ರಾಜ್ಯದ ಜನರ, ಪ್ರಜಾತಂತ್ರ ವ್ಯವಸ್ಥೆಯ ಹಾಗೂ ಸಂವಿಧಾನದ ಮೌಲ್ಯಗಳ ಗೆಲುವಾಗಿದೆ. ಅಲ್ಲದೆ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಮೇಲೆ ದಾಳಿ ಮಾಡುವ, ಸಂವಿಧಾನವನ್ನು ನಾಶ ಮಾಡಲು ಪ್ರಯತ್ನಿಸುವ ಸೋಲಾಗಿದೆ. ದೇಶದ ಬಡವರು, ಮಾಧ್ಯಮ ವರ್ಗದವರು, ಸಣ್ಣ ಉದ್ಯೋಗಸ್ಥರ ಗೆಲುವಾಗಿದೆ.
ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ, ನಂತರ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ರಾಜ್ಯದ ಮೂಲೆ ಮೂಲೆಯಲ್ಲಿ ಜನರನ್ನು ತಲುಪಿದರು. ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಹಗಲು ರಾತ್ರಿ ಎನ್ನದೆ ಒಂದು ತಿಂಗಳ ಕಾಲ ಪ್ರಚಾರ ಮಾಡಿದರು.
ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಈ ಗೆಲುವು ರಾಜ್ಯದ ಜನತೆ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ಒಗ್ಗಟ್ಟಿನ ಗೆಲುವಾಗಿದೆ.
ಕಾಂಗ್ರೆಸ್ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದ್ದು, ರಾಜ್ಯದ ಜನರಿಗೆ ಪಾರದರ್ಶಕ, ದಕ್ಷ ಆಡಳಿತ ನೀಡಲಿದೆ. ಆಮೂಲಕ ಕರ್ನಾಟಕ ಬ್ರ್ಯಾಂಡ್ ಮರುಸ್ಥಾಪಿಸಿ ದೇಶಕ್ಕೆ ಕರ್ನಾಟಕ ಮಾದರಿ ಆಗಲಿದೆ.