*ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು*

ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ ಸಾಮಾಜಿಕ ನ್ಯಾಯ, ಬಡವರು ಹಾಗೂ ಸೋಷಿತ ವರ್ಗದವರ ಹಕ್ಕಿನ ರಕ್ಷಣೆ, ಕಾರ್ಮಿಕರ ಹಕ್ಕು, ಮಧ್ಯಮ ವರ್ಗದವರ ಹಕ್ಕಿನ ರಕ್ಷಣೆಗೆ ಹೋರಾಟ ಮಾಡಿಕೊಂಡು ಬಂದಿರುವ ಇತಿಹಾಸವಿದೆ. ಕಾಂಗ್ರೆಸ್ ಹಾಗೂ ಸಿಪಿಐ ಸೈದ್ಧಾಂತಿಕವಾಗಿ ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ನಮ್ಮ ಗುರಿ ಒಂದೇ ಆಗಿದೆ. ಮೋದಿ ಸರ್ಕಾರದ ಬೆಲೆ ಏರಿಕೆ, ಬೊಮ್ಮಾಯಿ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರದ ವಿರುದ್ಧ, ಆಡಳಿತದಲ್ಲಿ ಪಾರದರ್ಶಕತೆ ತರುವ ಸಲುವಾಗಿ ಹೋರಾಟ ಮಾಡುವುದು ಈ ಎರಡು ಪಕ್ಷಗಳ ಗುರಿಯಾಗಿದೆ.

ಕರ್ನಾಟಕ ರಾಜ್ಯದ ಯುವಕರು 80 ಲಕ್ಷ ಲಂಚ ನೀಡಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆ ಪಡೆಯುವ ಸ್ಥಿತಿ ನಿರ್ಮೂಲನೆಯಾಗಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನು ಮಾರಾಟ ಮಾಡುವ ವ್ಯವಸ್ಥೆ ತೊಲಗಬೇಕು. ರಾಜ್ಯದ ಜನರ ಹಿತ ಕಾಯುವುದು ಸರ್ಕಾರದ ಏಕಮಾತ್ರ ಗುರಿಯಾಗಿರಬೇಕೇ ಹೊರತು, ಬಿಜೆಪಿ ರೀತಿ ರಾಜ್ಯವನ್ನು ಲೂಟಿ ಮಾಡುವುದಲ್ಲ.

ರಾಜ್ಯದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಬಡವರು, ಕಾರ್ಮಿಕರಿಗೆ ಸಿಗಬೇಕಾದ ನ್ಯಾಯ ದೊರಕಿಸಿಕೊಡಬೇಕು. ರಾಜ್ಯದಲ್ಲಿ ಮುಂದೆ ರಚನೆಯಾಗುವ ಸರ್ಕಾರ ಸಮಾನತೆ, ಸಾಮಜಿಕ ನ್ಯಾಯದ ಆಧಾರದ ಮೇಲೆ ರಚನೆಯಾಗಬೇಕು. ದೇಶದ ಮಧ್ಯಮ ವರ್ಗದ ಜನರನ್ನು ಸರ್ಕಾರದ ಬೆಲೆ ಏರಿಕೆಯಿಂದ ರಕ್ಷಣೆ ಮಾಡಬೇಕು. ಇದು ಕಾಂಗ್ರೆಸ್ ಹಾಗೂ ಸಿಪಿಐನ ಗುರಿಯಾಗಿವೆ.

ಈ ಎರಡು ಪಕ್ಷಗಳ ಕೆಲವು ಸಿದ್ಧಾಂತಗಳಲ್ಲಿ ಸಾಮ್ಯತೆಗಳೂ ಇವೆ. ಸಮಾನತೆ, ಸಾಮಾಜಿಕ ನ್ಯಾಯ, ಬಡವರು, ಮಧ್ಯಮ ವರ್ಗದ ಜನರ ಹಿತ ರಕ್ಷಣೆಯಂತಹ ಸಹಜ ಗುರಿ ಹೊಂದಿರುವ ಎಲ್ಲ ಶಕ್ತಿಗಳು ಒಂದುಗೂಡಬೇಕು.

ಸಿಪಿಐ ಪಕ್ಷ ಈ ಬಾರಿಯ ರಾಜ್ಯ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ಕ್ಷೇತ್ರಗಳಲ್ಲಿ ಸ್ಪರ್ಧಾತ್ಮಕ ಹೋರಾಟ ಇರಲಿದೆ. ಉಳಿದ 215 ಕ್ಷೇತ್ರಗಳಲ್ಲಿ ಸಿಪಿಐ ಪಕ್ಷದ ಕಾರ್ಯಕರ್ತರು ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ. ಬಿಜೆಪಿಯ ವಿರುದ್ಧ ಹೋರಾಟದಲ್ಲಿ ಇದೊ ಬಹಳ ದೊಡ್ಡ ತೀರ್ಮಾನವಾಗಿದ್ದು, ಈ ನಿರ್ಧಾರ ಕೈಗೊಂಡಿರುವ ಈ ಪಕ್ಷದ ನಾಯಕರುಗಳು ಹಾಗೂ ಕಾರ್ಯಕರ್ತರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

*ಪ್ರಶ್ನೋತ್ತರ:*

ಸಿದ್ದರಾಮಯ್ಯ ಅವರು ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪದ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸಿದ್ದರಾಮಯ್ಯ ಅವರು ಬಹಳ ಸ್ಪಷ್ಟವಾಗಿ ತಮ್ಮ ಹೇಳಿಕೆ ನೀಡಿದ್ದು, ಲಿಂಗಾಯತ ಸಮುದಾಯದಿಂದ ಬಂದು ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಉತ್ತಮ ಕೊಡುಗೆಗಳನ್ನು ನೀಡಿರುವವರ ಬಗ್ಗೆ ನನಗೆ ಬಹಳ ಗೌರವವಿದೆ. ವೀರೇಂದ್ರ ಪಾಟೀಲ್, ಜೆ.ಹೆಚ್ ಪಟೇಲ್, ನಿಜಲಿಂಗಪ್ಪ ಅವರು ಲಿಂಗಾಯತ ಸಮುದಾಯದಿಂದ ರಾಜ್ಯದ ಮುಖ್ಯಮಂತ್ರಿಗಳಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಆದರೆ ದುರಾದೃಷ್ಟವಶಾತ್, ಬಸವರಾಜ ಬೊಮ್ಮಾಯಿ ಅವರು ಅವರದೇ ಪಕ್ಷ ಶಾಸಕ ನೆಹರೂ ಓಲೇಕರ್ ಅವರ ಪ್ರಕಾರ 40% ಕಮಿಷನ್ ಏಜೆಂಟ್ ಆಗಿದ್ದಾರೆ. ಈ ಆರೋಪ ನಾವು ಮಾಡಿಲ್ಲ. ನೆಹರೂ ಓಲೇಕರ್ ಹೇಳಿರುವುದನ್ನು ಸಿದ್ದರಾಮಯ್ಯ ಪುನರುಚ್ಛರಿಸಿದರೆ, ಅದರಲ್ಲಿ ತಪ್ಪೇನಿದೆ? ಬೊಮ್ಮಾಯಿ ಅವರು ತಾವೊಬ್ಬರೆ ಇಡೀ ಲಿಂಗಾಯತ ಸಮಾಜದ ಪ್ರತೀಕ ಎಂಬ ಭ್ರಮೆಯಿಂದ ಹೊರಬರಬೇಕು. ಬೊಮ್ಮಾಯಿ ಅವರು ತಮ್ಮ 40% ಕಮಿಷನ್ ಭ್ರಷ್ಟಾಚಾರದಿಂದ ರಾಜ್ಯಕ್ಕೆ ಕಳಂಕ ತಂದಿದ್ದಾರೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಹೆಚ್ ಪಟೇಲ್ ಸೇರಿದಂತೆ ರಾಜ್ಯದ ಪ್ರಮುಖ ಮುಖ್ಯಮಂತ್ರಿಗಳು ತಮ್ಮ ಸಮುದಾಯಕ್ಕೆ ಮಾತ್ರವಲ್ಲ ರಾಜ್ಯಕ್ಕೆ ಕೀರ್ತಿ ತಂದಿದ್ದರು. ಬೊಮ್ಮಾಯಿ ಅವರು ಇವರುಗಳನ್ನು ನೋಡಿ ಶೇ.1 ರಷ್ಟಾದರೂ ಕಲಿತಿದ್ದರೆ ಸಾಕಿತ್ತು. ಇಂದು ಬಸವಣ್ಣ ಜಯಂತಿ. ಬಸವಣ್ಣನ ಸಿದ್ಧಾಂತ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಂದೇ ಆಗಿದೆ. ಜಾತಿರಹಿತ ಸಮಾಜ, ಅಸಮಾನತೆ ರಹಿತ ಸಮಾಜ ನಿರ್ಮಾಣ ಬಸವಣ್ಣ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತವಾಗಿದೆ. ಬಸವಣ್ಣನವರು ಮನುಷ್ಯರಲ್ಲಿ ಸಮಾನತೆಯನ್ನು ಸಾರಲು ಮುಂದಾದವರು. ಅವರ ಮಾರ್ಗದರ್ಶನಗಳೇ ಭಾರತದ ಪ್ರಜಾಪ್ರಭುತ್ವದ ಅಡಿಪಾಯ. ಇಂದು ದೇಶದಲ್ಲಿ ಕಾಣುತ್ತಿರುವ ಸಂಸತ್ ಪ್ರಜಾಪ್ರಭುತ್ವವನ್ನು ಬಸವಣ್ಣನವರು 900 ವರ್ಷಗಳ ಹಿಂದೆಯೇ ಅಳವಡಿಸಿಕೊಂಡಿದ್ದರು. ಕಾಂಗ್ರೆಸ್ ಸ್ವಾತಂತ್ರ್ಯ ಚಳುವಳಿ ಬಸವಣ್ಣನವರ ವಚನ, ಮಹಾತ್ಮಾ ಗಾಂಧಿ ಅವರ ಆದರ್ಶಗಳ ಮೇಲೆ ಸಾಗಿತ್ತು. ಬಸವರಾಜ ಬೊಮ್ಮಾಯಿಯಂತಹವರು ರಾಜ್ಯಕ್ಕೆ ಕಳಂಕ ತಂದಿದ್ದಾರೆ. ಬಿಜೆಪಿಯವರು ಈ ಸಮಾಜದ ಪ್ರಮುಖರಾದ ಯಡಿಯೂರಪ್ಪ ಅವರಂತಹ ಪ್ರಮುಖ ನಾಯಕರನ್ನು ಬಳಸಿ ಮೂಲೆಗೆ ಬಿಸಾಡಿದೆ. ಯಡಿಯೂರಪ್ಪ ಅವರ ಜತೆ ನಮಗೆ ಸಾಕಷ್ಟು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ ನಾವು ಯಡಿಯೂರಪ್ಪ ಅವರನ್ನು ಶೋಭಾ ಕರಂದ್ಲಾಜೆ ಅವರ ಕೆಳಗೆ ನೇಮಕ ಮಾಡುತ್ತಿರಲಿಲ್ಲ. ಜಗದೀಶ್ ಶೆಟ್ಟರ್ ಅವರನ್ನು ಅಪಮಾನ ಮಾಡಿದ್ದು ನಾವಲ್ಲ, ಬಿಜೆಪಿಯವರು. ಉಪಮುಖ್ಯಮಂತ್ರಿಯಾಗಿದ್ದ ಸವದಿ ಅವರನ್ನು ಮೂಲೆ ಗುಂಪು ಮಾಡಿದ್ದು ಬಿಜೆಪಿ. ಅನೇಕ ಲಿಂಗಾಯತ ನಾಯಕರನ್ನು ಅಪಮಾನ ಮಾಡಿದ್ದು ಬಿಜೆಪಿ. ಬಿಜೆಪಿ ಹಾಗೂ ಬೊಮ್ಮಾಯಿ ಅವರು ಎಸ್ ಸಿ, ಎಸ್ ಟಿ, ಒಬಿಸಿಗೆ ಮಾತ್ರ ಮೋಸ ಮಾಡಿಲ್ಲ, ಮೀಸಲಾತಿ ಹೆಸರಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಅಲ್ಪಸಂಖ್ಯಾತರ ಮೀಸಲಾತಿ ಕಿತ್ತು, ಅದನ್ನು ಒಕ್ಕಲಿಗರು, ಲಿಂಗಾಯತರಿಗೆ ನೀಡಿ, ಈ ತೀರ್ಮಾನವನ್ನು ಸುಪ್ರೀಂ ಕೋರ್ಟ್ ನಲ್ಲಿ ತಡೆ ಹಿಡಿದಿದ್ದಾರೆ. ಬೊಮ್ಮಾಯಿ ಅವರೇ ಮೀಸಲಾತಿ ವಿಚಾರವಾಗಿ ನಿಮ್ಮ ತೀರ್ಮಾನವನ್ನು ಸುಪ್ರೀಂ ಕೋರ್ಟ್ ನಲ್ಲಿ ತಡೆದಿರುವುದೇಕೆ? ಇಂದು ಬಸವಣ್ಣನವರ ಜಯಂತಿ, ಹೀಗಾಗಿ ನೀವು ಲಿಂಗಾಯತ ಸಮುದಾಯದವರಿಗೆ ಈ ವಿಚಾರವಾಗಿ ಸ್ಪಷ್ಟನೆ ನೀಡಬೇಕು. ನೀವು ಲಿಂಗಾಯತರಿಗೆ ಅಪಮಾನ, ದ್ರೋಹ ಬಗೆದಿದ್ದು, ನೀವು ನಮ್ಮನ್ನು ಪ್ರಶ್ನೆ ಮಾಡುತ್ತೀರಾ’ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ದ ಬಿಜೆಪಿ ನಾಯಕರ ನಿರಂತರ ಟ್ವೀಟ್ ಬಗ್ಗೆ ಕೇಳಿದಾಗ, ‘ಸುಳ್ಳು ಹಾಗೂ ವಂಚನೆ ಹೆಚ್ಚಿನ ಕಾಲ ಬಾಳಿಕೆ ಬರುವುದಿಲ್ಲ. ಆದರೆ ಬಿಜೆಪಿ ಇದನ್ನೇ ಮಾಡುತ್ತಿದೆ. ಬಿಜೆಪಿಯವರು ಮೂರು ಪ್ರಶ್ನೆಗಳಿಗೆ ಉತ್ತರ ನೀಡಲಿ. ಬೊಮ್ಮಾಯಿ ಅವರ ಸರ್ಕಾರ ಲಿಂಗಾಯತರ ಮೀಸಲಾತಿ ಹೆಚ್ಚಳ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ತಡೆಹಿಡಿದಿರುವುದೇಕೆ? ಬೊಮ್ಮಾಯಿ ಅವರು ಸಾಲಿಸಿಟರ್ ಜೆನರಲ್ ತುಷಾರ್ ಮೆಹ್ತಾ ಅವರ ಮುಖೇನ ಸುಪ್ರೀಂ ಕೋರ್ಟ್ ನಲ್ಲಿ ಲಿಂಗಾಯತ, ಒಖ್ಕಲಿಗ, ಪರಿಶಿಷ್ಟ ಜಾತಿ ಹಾಗೂ ಪಂಗಡ ಮೀಸಲಾತಿ ಹೆಚ್ಚಳದ ಸರ್ಕಾರಿ ಆದೇಶಕ್ಕೆ ತಡೆ ತಂದಿರುವುದೇಕೆ? ಇದು ಈ ಸಮುದಾಯಗಳಿಗೆ ಮಾಡಿರುವ ಅಪಮಾನ, ದ್ರೋಹವಲ್ಲವೇ?

ಬೊಮ್ಮಾಯಿ ಹಾಗೂ ಸಂತೋಷ್ ಅವರು ಲಿಂಗಾಯತ ಸಮುದಾಯದ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದು ಯಾಕೆ?

ಬೊಮ್ಮಾಯಿ ಹಾಗೂ ಸಂತೋಷ್ ಅವರು ನಿರಂತರವಾಗಿ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿರುವುದೇಕೆ? ಈ ಪ್ರಶ್ನೆಗಳಿಗೆ ಬಿಜೆಪಿ ಉತ್ತರ ನೀಡಿದ ನಂತರ ಅವರು ನಮ್ಮನ್ನು ಪ್ರಶ್ನಿಸಲಿ’ ಎಂದು ತಿಳಿಸಿದರು.

*ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಎಐಸಿಸಿ ವಕ್ತಾರರಾದ ಗೌರವ್ ವಲ್ಲಭ್ ಸಿಪಿಐನ ರಾಜ್ಯ ಕಾರ್ಯದರ್ಶಿಗಳಾದ ಸುದ್ರೇಶ್ ಅವರು ಎಐಟಿಯುಸಿ ರಾಜ್ಯಾಧ್ಯಕ್ಷರಾದ ಕಾಮ್ರೇಡ್ ಅನಂತ ಸುಬ್ಬರಾವ್, ಸಿಪಿಐ ರಾಜ್ಯ ಸಹಾಯಕ ಕಾರ್ಯದರ್ಶಿ ಕಾಮ್ರೇಡ್ ಅಮ್ಜದ್, ಸಿಪಿಐನ ಕಾರ್ಯಕಾರಿ ಸದಸ್ಯರಾದ ಕಾಮ್ರೇಡ್ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.*

kanews

kanews

Leave a Reply

Your email address will not be published. Required fields are marked *