ಶಕ್ತಿಶಾಲಿ ಕರ್ನಾಟಕ ನಿರ್ಮಾಣಕ್ಕೆ ಆಶೀರ್ವದಿಸಿ- ಬಸವರಾಜ ಬೊಮ್ಮಾಯಿ

ಬೆಂಗಳೂರು: ಭ್ರಷ್ಟಾಚಾರದ ವಿಚಾರದಲ್ಲಿ ನಾವು ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯ 13ನೇ ಅಡ್ಡರಸ್ತೆಯ ನಂ.75, “ಗಿರಿಜಾರಾಮ ದೈವಜ್ಞ ಭವನ”ದಲ್ಲಿ ಮಾಧ್ಯಮ ಕೇಂದ್ರದ ಉದ್ಘಾಟನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ 40 ಎಂದು ಆರೋಪಿಸುವ ಗುತ್ತಿಗೆದಾರರ ಸಂಘದವರು ಯಾವುದೇ ದಾಖಲೆ, ಸಾಕ್ಷ್ಯಾಧಾರ ನೀಡಿಲ್ಲ ಎಂದು ವಿವರಿಸಿದರು.
ಕೋರ್ಟಿನಲ್ಲೂ ದಾಖಲೆ ಕೊಡಲಿಲ್ಲ. ಇವತ್ತಿನವರೆಗೂ ಸಾಕ್ಷಿ ನೀಡಿಲ್ಲ. ರಾಜಕೀಯಪ್ರೇರಿತವಾಗಿ ಕಾಂಗ್ರೆಸ್ ಪಕ್ಷವು ಗುತ್ತಿಗೆದಾರರ ಸಂಘವನ್ನು ಬಳಸಿಕೊಂಡಿದೆ ಎಂದು ಆಕ್ಷೇಪಿಸಿದರು. ತನಿಖೆ ಎದುರಿಸಲು ನಾವು ಈಗಲೂ ಸಿದ್ಧರಿದ್ದೇವೆ. ಲೋಕಾಯುಕ್ತರಿಗೆ ವಿವರ ಕೊಡಿ ಎಂದು ಸವಾಲು ಹಾಕಿದರು.
ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಆರೋಪ ಮಾಡುತ್ತಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದ ಸರಮಾಲೆ ಇದೆ. ಇವರಿಗೆ ಭ್ರಷ್ಟಾಚಾರದ ಕುರಿತು ಮಾತನಾಡಲು ನೈತಿಕತೆ ಇಲ್ಲ ಎಂದರು.
ನಮ್ಮ ಸರಕಾರ ಕ್ರಿಯಾಶೀಲ, ಜನಪರ, ಜನಕಲ್ಯಾಣ ಮಾಡುವ ಸರಕಾರವಾಗಿದೆ. ಬಡವರು, ದೀನದಲಿತರು, ಹೆಣ್ಣುಮಕ್ಕಳು, ಯುವಕರು, ರೈತರ ಪರವಾಗಿ ಕೆಲಸ ಮಾಡಿದ್ದೇವೆ. ದುಡಿಯುವ ವರ್ಗ ಬಿಜೆಪಿಯೇ ಭರವಸೆ ಎಂದು ನಮ್ಮ ಪರವಾಗಿ ನಿಂತಿದೆ. ಜನರ ಆಶೀರ್ವಾದ, ಬೆಂಬಲದಿಂದ ಮುಂದಿನ 5 ವರ್ಷಗಳ ಕಾಲ ನಮ್ಮ ಸರಕಾರ ಮತ್ತೆ ಆಡಳಿತ ನಡೆಸಲಿದೆ. ಜನರು ಪ್ರಧಾನಿ ಮೋದಿಜಿ ನಾಯಕತ್ವಕ್ಕೆ ಮತ್ತೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನರ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನವಕರ್ನಾಟಕ ನಿರ್ಮಿಸಲು ನಾವು ಬದ್ಧರಿದ್ದೇವೆ. ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಿಸುತ್ತೇವೆ. ಪ್ರಧಾನಿಯವರ 5 ಟ್ರಿಲಿಯನ್ ಡಾಲರ್ ಇಕಾನಮಿಗೆ 1 ಟ್ರಿಲಿಯನ್ ಡಾಲರ್ ಕೊಡುಗೆ ನಮ್ಮದಾಗಿರಲಿದೆ ಎಂದು ನುಡಿದರು.
ಕಳೆದ 4 ವರ್ಷಗಳಲ್ಲಿ ಸರಾಸರಿ 13.30 ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಿದೆ. ನಿರುದ್ಯೋಗದ ರಾಷ್ಟ್ರೀಯ ಸರಾಸರಿ ಶೇ 4.2 ಇದ್ದರೆ ನಮ್ಮದು 2.6 ಇದೆ. ಎಲ್ಲ ಜಾತಿ, ಧರ್ಮಗಳಿಗೆ ಸಮಾನ ಅವಕಾಶ ಇರುವ ಸದೃಢ ಆರ್ಥಿಕ ಶಕ್ತಿಯಾಗಿ ಕರ್ನಾಟಕ ಬೆಳೆದಿದೆ ಎಂದು ತಿಳಿಸಿದರು.
ಯುವಜನರಿಗೆ ಇನ್ನಷ್ಟು ಅವಕಾಶಗಳಿರುವ, ರೈತರಿಗೆ ಸದೃಢ ಬದುಕನ್ನು ಕೊಡುವ ಶಕ್ತಿಶಾಲಿ ಕರ್ನಾಟಕವನ್ನು ನಿರ್ಮಿಸಲು ನಾವು ಬದ್ಧರಿದ್ದೇವೆ. ಮಹಾಜನತೆ ನಮಗೆ ಆಶೀರ್ವಾದ ಮಾಡಬೇಕು. ಆ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ 50ಕ್ಕೂ ಹೆಚ್ಚು ಹಗರಣಗಳು ನಡೆದಿವೆ. ಅವುಗಳ ಕುರಿತ ದೂರು ಎಸಿಬಿಗೆ ಹೋಗಿತ್ತು. ಎಲ್ಲದಕ್ಕೂ ಬಿ ರಿಪೋರ್ಟ್ ಹಾಕಲಾಗಿತ್ತು. ಲೋಕಾಯುಕ್ತದ ಅಧಿಕಾರವನ್ನು ಶೂನ್ಯ ಮಾಡಿದವರು ಕಾಂಗ್ರೆಸ್ಸಿಗರು. ಇದು ಕರ್ನಾಟಕದ ಜನತೆಗೆ ಮೋಸ ಮಾಡುವ ಕೆಲಸ. ನಾವು ಲೋಕಾಯುಕ್ತರಿಗೆ ಮತ್ತೆ ಅಧಿಕಾರ ಕೊಟ್ಟಿದ್ದೇವೆ ಎಂದು ತಿಳಿಸಿದರು.
2014ರ ಬಳಿಕ ನರೇಂದ್ರ ಮೋದಿಜಿ ಅವರ ಆಡಳಿತದಲ್ಲಿ ಪ್ರತಿ ನಾಗರಿಕರಲ್ಲಿ ಆತ್ಮವಿಶ್ವಾಸ ಮೂಡಿದೆ. ಸುರಕ್ಷತೆ, ಅಭಿವೃದ್ಧಿಯ ವಿಚಾರದಲ್ಲಿ ವಿಶ್ವಾಸ ಮೂಡಿದೆ. ಅತಿ ಹೆಚ್ಚು ಹೆದ್ದಾರಿ, ರೈಲ್ವೆ ಲೈನ್, ವಿಮಾನನಿಲ್ದಾಣಗಳು, ಮೆಡಿಕಲ್ ಕಾಲೇಜು- ಎಲ್ಲ ರಂಗದಲ್ಲಿ ಸಾಧನೆ ಆಗಿದೆ. ಸಾಮಾಜಿಕ ಸೌಕರ್ಯದಲ್ಲೂ ನಾವು ಮುಂದಿದ್ದೇವೆ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕೆಂದು ಹಲವು ಯೋಜನೆ ಜಾರಿಗೊಳಿಸಿದ್ದಾರೆ ಎಂದರು.
ಕರ್ನಾಟಕದ 54 ಲಕ್ಷಕ್ಕೂ ಹೆಚ್ಚು ರೈತರು ಸೇರಿ 20 ಕೋಟಿಯಷ್ಟು ರೈತರನ್ನು ಕಿಸಾನ್ ಸಮ್ಮಾನ್ ಯೋಜನೆ ತಲುಪುತ್ತಿದೆ. 16 ಸಾವಿರ ಕೋಟಿ ರೂ. ಕರ್ನಾಟಕದ ರೈತರಿಗೆ ಸಿಕ್ಕಿದೆ. ನಮ್ಮನ್ನು ಹಿಂದೆ ಆಳಿದವರು ಸ್ವಚ್ಛ ಭಾರತ ಯೋಜನೆ ಬಗ್ಗೆ ವ್ಯಂಗ್ಯವಾಡಿದ್ದರು. ಕಳೆದ 3 ವರ್ಷಗಳ ಹಿಂದೆ ಮೋದಿಜಿ ಪ್ರತಿ ಮನೆಗೆ ನಳ್ಳಿನೀರು ಕೊಡುವ ಘೋಷಣೆ ಮಾಡಿದ್ದಾರೆ. ಹಿಂದಿನ ಸರಕಾರಗಳು ಆ ಸಾಹಸ ಮಾಡಿರಲಿಲ್ಲ. ಅದು ಅನುಷ್ಠಾನಕ್ಕೆ ಬಂದಿದೆ. ಕರ್ನಾಟಕದಲ್ಲಿ ಸುಮಾರು 40 ಲಕ್ಷ ಮನೆಗಳಿಗೆ ಸೇರಿದಂತೆ ದೇಶದಲ್ಲಿ 12 ಕೋಟಿ ಮನೆಗಳಿಗೆ ನೀರಿನ ಸೌಕರ್ಯ ಕೊಡಲಾಗಿದೆ ಎಂದು ವಿವರಿಸಿದರು.
ಮನೆಮನೆಗೆ ಬೆಳಕು ಕೊಟ್ಟಿದ್ದೇವೆ. ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ರಾಜ್ಯ ಸರಕಾರವು ರೈತ ವಿದ್ಯಾನಿಧಿ ಘೋಷಿಸಿದೆ. 11 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು 800 ಕೋಟಿ ರೂ. ಲಾಭ ಪಡೆದಿದ್ದಾರೆ ಎಂದು ವಿವರ ನೀಡಿದರು.
ಮಹಿಳೆಯರಿಗಾಗಿ ಸ್ತ್ರೀಸಾಮಥ್ರ್ಯ ಯೋಜನೆ ಜಾರಿ ಮಾಡಿದ್ದು, 3 ಲಕ್ಷ ಜನರಿಗೆ ಪ್ರಯೋಜನ ಸಿಗುತ್ತಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ಕಾಯಕ ಯೋಜನೆ ಮೂಲಕ ಜನರಿಗೆ ನೆರವಾಗುತ್ತಿದ್ದೇವೆ. ದುಡಿಯುವ ವರ್ಗಕ್ಕೆ ಅವಕಾಶ ಮತ್ತು ಗೌರವ ಕೊಡಲಾಗುತ್ತಿದೆ. ಶಿಕ್ಷಣ- ಆರೋಗ್ಯಕ್ಕೆ ವಿಶೇಷ ಗಮನ ನೀಡುತ್ತಿದ್ದೇವೆ. ಕೋವಿಡ್ ನಂತರವೂ ಮಿಗತೆ ಬಜೆಟ್ ಕೊಡಲಾಗಿದೆ ಎಂದು ತಿಳಿಸಿದರು.
ಗರಿಷ್ಠ ಬಂಡವಾಳ ಹೂಡಿಕೆ, ಕಂದಾಯ ಸಂಗ್ರಹದಲ್ಲಿ 15ರಿಂದ 20 ಸಾವಿರ ಕೋಟಿ ಏರಿಕೆ ಆಗುತ್ತಿದೆ. ಜಿಎಸ್‍ಟಿಯಲ್ಲಿ ನಂಬರ್ 2, ಇನೊವೇಶನ್- ಎಫ್‍ಡಿಐಯಲ್ಲಿ ನಂಬರ್ ವನ್ ಆಗಿದ್ದೇವೆ. 500 ಫಾರ್ಚೂನ್ ಕಂಪೆನಿಯಲ್ಲಿ 400 ಕರ್ನಾಟಕದ್ದೇ ಇವೆ ಎಂದು ತಿಳಿಸಿದರು.
ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ ಎಂದ ಅವರು, ಕರ್ನಾಟಕದಲ್ಲೂ ಬಿಜೆಪಿ ಆಳವಾಗಿ, ವ್ಯಾಪಕವಾಗಿ ಬೇರೂರಿ ಮನೆ ಮನೆಗೆ ತಲುಪಿದೆ. ಉತ್ತಮ ಸಂಘಟನೆ ಹೊಂದಿರುವ ಬಿಜೆಪಿ 4 ಸದಸ್ಯರ ಜನಸಂಘದಿಂದ ಆರಂಭವಾಗಿ ಕೊನೆಗೆ ಬಿಜೆಪಿ ಆದಾಗ ಆರಂಭದಲ್ಲಿ ಇಬ್ಬರೇ ಸದಸ್ಯರಿದ್ದರು ಎಂದು ನೆನಪಿಸಿದರು.
ಬಿ.ಎಸ್.ಯಡಿಯೂರಪ್ಪ ಅವರ ಜನಪರ ಹೋರಾಟಗಳಿಂದ ಜನಮಾನಸದಲ್ಲಿ ಪಕ್ಷವು ಬೆಳೆಯಿತು. ಅನಂತಕುಮಾರ್ ಅಧ್ಯಕ್ಷತೆಯಲ್ಲೂ ಈ ಬೆಳವಣಿಗೆ ಮುಂದುವರಿದಿದೆ. 2008ರಿಂದ 5 ವರ್ಷ ಬಡವರ ಪರವಾಗಿ, ವಯೋವೃದ್ಧರಿಗೆ ಸೇರಿ ವಿವಿಧ ಯೋಜನೆ, ರೈತರಿಗೆ ವಿಶೇಷ ಬಜೆಟ್ ಕೊಡಲಾಗಿದೆ. ಇದು ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದಿದೆ ಎಂದರು.
ಯುಪಿಎ ಸರಕಾರ 10 ವರ್ಷ ದೇಶದ ಆಡಳಿತವನ್ನು ಹದಗೆಡಿಸಿತ್ತು. ಅಸ್ಥಿರತೆಯ ಯುಗ ಆರಂಭವಾಗಿತ್ತು. ಭಯೋತ್ಪಾದನೆ ಹೆಚ್ಚಾಯಿತು. ಬೆಂಗಳೂರು ಸೇರಿ ವಿವಿಧೆಡೆ ಸ್ಫೋಟಗಳು ಸಂಭವಿಸಿದವು. ಭ್ರಷ್ಟಾಚಾರದ ಸರಣಿ ಹೆಚ್ಚಾಯಿತು. ಆಡಳಿತದಲ್ಲಿ ಅವ್ಯವಸ್ಥೆ ಇತ್ತು ಎಂದು ವಿವರಿಸಿದರು. ಆದರೆ, ಮೋದಿಜಿ ನೇತೃತ್ವದಲ್ಲಿ ದೇಶದಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಮತ್ತು ಕೇಂದ್ರ ಸಚಿವೆÀ ಕು. ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಮುಖ್ಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಅನಿಲ್ ಬಲೂನಿ, ಕೇಂದ್ರ ಸಚಿವರಾದ ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್, ರಾಷ್ಟ್ರೀಯ ವಕ್ತಾರ ಜಾಫರ್ ಇಸ್ಲಾಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ರಾಜ್ಯದ ವಕ್ತಾರ, ಶಾಸಕ ರಾಜುಗೌಡ ಮತ್ತಿತರರು ಭಾಗವಹಿಸಿದ್ದರು.

 

kanews

kanews

Leave a Reply

Your email address will not be published. Required fields are marked *